Wednesday, June 20, 2012

ಬೆಂಗಳೂರು ಮೆಟ್ರೋ ಜನಸ್ನೇಹಿಯಲ್ಲ!!


ಬೆಂಗಳೂರು ಮೆಟ್ರೋ ಜನಸ್ನೇಹಿಯಲ್ಲ!

ನಾನು ಇರುವುದು ಪುಣೆ ಯಲ್ಲಿ. ಹೀಗಾಗಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಪ್ರಾರಂಭ ವಾದಾಗಿಂದ ಅದರಲ್ಲಿ ಒಮ್ಮೆ ಪ್ರಯಾಣಿಸಿ ನೋಡುವ ಆಸೆ ಇತ್ತು. ಇತ್ತೀಚಿಗೆ ಬೆಂಗಳೂರಿಗೆ ಹೋಗುವ ಅವಕಾಶ ಸಿಕ್ಕಿ ಕೊನೆಗೂ ಮೆಟ್ರೋ ಪ್ರಯಾಣದ ಆಸೆ ಈಡೇರುವ ದಿನ ಬಂತು. ಹಾಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ನಂತರ ನನ್ನ ಅನುಭವ ಇದು:

ರಿಟೇಲ್ ದೈತ್ಯ ಬಿಗ್‌ಬಜಾರ್ ಅಥವಾ ಫ್ಯೂಚರ್ ಗ್ರೂಪ್ ನ ಮಾಲೀಕ ಕಿಶೋರ ಬಿಯಾನಿ ತನ್ನ ಪುಸ್ತಕ ‘ಇಟ್ ಹ್ಯಾಪ್ಪನ್‌ಡ್ ಇನ್ ಇಂಡಿಯಾ’ದಲ್ಲಿ ಈ ರೀತಿ ಬರೆಯುತ್ತಾರೆ- “ಯಾವುದೇ ಒಂದು ಅಂಗಡಿ ನಡೆಯಬೇಕಾದರೆ ಅದು ಜನಕ್ಕೆ ಹತ್ತಿರವಾಗಿರಬೇಕಾದದ್ದು ಅತ್ಯಗತ್ಯ. ನೀವು ಝಗಮಗಿಸುವ ಗಾಜುಗಳಿಂದ ಕೂಡಿದ ಕಟ್ಟದದಲ್ಲಿ, ಗರಿಗರಿ ಮಿಂಚುವ ಯುನಿಫಾರ್ಮ್ ತೊಟ್ಟ ದೊಡ್ಡ ಟೋಪಿ ಹಾಗು ಕೈಯಲ್ಲಿ ಕಪ್ಪನೆಯ ದೊಣ್ಣೆ ಹಿಡಿದ ಸೆಕ್ಯೂರಿಟಿ ಗಾರ್ಡ್ ನಿಲ್ಲಿಸಿದರೆ ಮುಗಿಯಿತು, ಜನಸಾಮಾನ್ಯರು ಇದ್ಯಾವುದೋ ದೊಡ್ಡ ವಹಿವಾಟಿನವರ ಅಂಗಡಿ ಎಂದು ಮಾರು ದೂರ ಸರಿಯುತ್ತಾರೆಯೇ ವಿನಾ ಒಳಕ್ಕೆ ಕಾಲಿಡಲ್ಲ. ಇದನ್ನು ನೀವು ಎಲ್ಲ ಮಾಲ್‌ಗಳಲ್ಲೂ ನೋಡಬಹುದು. ಅದೇ ಸಿಂಪಲ್ ಅಂಗಡಿ ಯಾವಾಗಲೂ ಜನರಿಂದ ತುಂಬಿರುತ್ತದೆ ಕಾರಣ ಜನ ಅದನ್ನು ತಮ್ಮ ಹೃದಯಕ್ಕೆ ಹತ್ತಿರ ತರುತ್ತಾರೆ.” 

ಈಗ ಮೆಟ್ರೋ ರೈಲ್ ಕೂಡ ಒಂದು ದೊಡ್ಡ ಹೈಫೈ ಶಾಪಿಂಗ್ ಮಾಲ್ ಥರ ಆಗಿದೆ ಹೊರತು ಜನಸಾಮಾನ್ಯರಿಗೆ ಹತ್ತಿರವಾಗಿಲ್ಲ. ಇಲ್ಲದಿದ್ದರೆ ಇಂದು ಮೆಟ್ರೋ ರೈಲು ತುಂಬಿ ತುಳುಕಾಡಿ ಓಲ್ಡ್ ಮದ್ರಾಸ್ ರಸ್ತೆಗೆ ಹೋಗುವ ಬಸ್ಸುಗಳು ಖಾಲಿ ಓಡಾಡಬೇಕಿತ್ತು. ಒಂದು ದೊಡ್ಡ ಗಾಜಿನ ಅರಮನೆ ಕಟ್ಟಿ, ಅದಕ್ಕೆ ಬ್ಲಾಕ್ ಕ್ಯಾಟ್ ಕಮಾಂಡೋಗಳನ್ನೂ ನಾಚಿಸುವಂಥ ಸೆಕ್ಯೂರಿಟಿ ಗಾರ್ಡ್ ಗಳನ್ನಿಟ್ಟು, ಮೊದಲು ಇಂಗ್ಲಿಷ್‌ನಲ್ಲೇ ಮಾತಾಡುವ ಟಿಕೆಟ್ ಮಾರುವವರನ್ನಿಟ್ಟು ಅದನ್ನು ಸಾಮಾನ್ಯ ಜನರಿಂದ ದೂರ ಮಾಡಲಾಗಿದೆಯೇ ಹೊರತು ಜನಸ್ನೇಹಿಯಂತೂ ಆಗಿಲ್ಲ. ಹಾಗಾದರೆ ಸ್ವಚ್ಛತೆ ಶಿಸ್ತು ಬೇಡವೇ  ಎಂದು ನೀವು ಕೇಳಬಹುದು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣವು ಸ್ವಚ್ಛತೆಯಲ್ಲಿ ಯಾವದಕ್ಕೂ ಕಮ್ಮಿ ಇಲ್ಲ. ಆದರೆ ಅವು ಗಾಜಿನ ಅರಮನೆಗಳಾಗದೆ ಜನಸ್ನೇಹಿಯಾಗಿವೆ.
ಮೆಟ್ರೋ ಕೂಡ ತನ್ನ ಹೈಫೈ ರೂಪ ಬಿಟ್ಟು ಜನಕ್ಕೆ ಹತ್ತಿರವಾಗದಿದ್ದಲ್ಲಿ ಮೆಟ್ರೋ ರೈಲು ನನ್ನಂತೆ ಜಾಲಿ ರೈಡ್ ಮಾಡಿ ಫೋಟೋ ತೆಗೆಸಿ  ಫೇಸ್‌ಬುಕ್‌ನಲ್ಲಿ ಹಾಕೋಕೆ ಮಾತ್ರ ಉಪಯೋಗಿಸಲ್ಪಡುವ ಅಪಾಯವಿದೆ!

No comments: